BHEEMA VIJAYA KARKAN25113/13/7/2015-TC HASSAN

ವಿದ್ಯಾರ್ಥಿ ವೇತನ ಕೊಡದಿದ್ದರೆ ರಾಜ್ಯವ್ಯಾಪಿ ಮುಷ್ಕರ: ದಸಂಸ ಎಚ್ಚರಿಕೆ



ಸಕಲೇಶಪುರ: ಕಳೆದ ಎರಡು ಶೈಕ್ಷಣಿಕ ವರ್ಷದಿಂದ ಬಿಡುಗಡೆಯಾಗದೆ ಬಾಕಿ ಇರುವ 9 ಮತ್ತು 10ನೆ ತರಗತಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಾರ್ಷಿಕ ವಿದ್ಯಾರ್ಥಿ ವೇತನ ಬಿಡುಗಡೆ ಮಾಡದಿದ್ದರೆ ರಾಜ್ಯವ್ಯಾಪಿ ಮುಷ್ಕರ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅಂಬೇಡ್ಕರ್ ವಾದಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ಬೇರೆ ಜಾತಿ ಹಾಗೂ ವರ್ಗಗಳ ವಿದ್ಯಾರ್ಥಿ ವೇತನಗಳನ್ನು ನಿಯಮಿತವಾಗಿ ಬಿಡುಗಡೆ ಮಾಡುತ್ತಿರುವ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೇಕೆ ವೇಥನ ನೀಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸರಕಾರದಿಂದ ಹಣ ಬಂದಿಲ್ಲ ನಾವೇನು ಮಾಡಲು ಸಾಧ್ಯ ಎಂದು ಹೇಳುತ್ತಿದ್ದಾರೆ. ಹೀಗಾದರೆ ಬಡ ಮಕ್ಕಳ ಪಾಡೇನು ಎಂದು ಪ್ರಶ್ನಿಸಿದರು.

ತಾಲೂಕಿನಲ್ಲಿಯೆ ಒಟ್ಟು 25.24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನ ಬಾಕಿ ಉಳಿದಿದೆ. ಕಳೆದ ವರ್ಷ 10ನೆ ತರಗತಿಯಲ್ಲಿ ವ್ಯಾಸಂಗ ಮಾಡಿ ಬೇರೆ ಕಾಲೇಜುಗಳಿಗೆ ಸೇರಿರುವ ವಿದ್ಯಾರ್ಥಿಗಳೂ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಬಾಕಿ ಇರುವ ಅನುದಾನವನ್ನು ಸರಕಾರ ಜನವರಿ ಅಂತ್ಯದೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾಧ್ಯಂತ ಪ್ರತಿ ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ನಾವೆ ಹೋರಾಡಬೇಕೆ?
ದಲಿತ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಕೇವಲ ದಲಿತ ಸಂಘಟನೆಗಳು ಮಾತ್ರ ಹೋರಾಡಬೇಕಾದ ಸ್ಥಿತಿ ಇದೆ. ವಿವಿಧ ರಾಜಕಿಯ ಪಕ್ಷಗಳಲ್ಲಿ ದಲಿತ ಮುಖಂಡರೆಂದು ಬೀಗುತ್ತಿರುವವರು ತಮ್ಮ ರಾಜಕಿಯ ಪ್ರಾಬಲ್ಯವನ್ನು ಅವರ ಮಕ್ಕಳು, ಸಂಬಂಧಿಕರ ಉದ್ದಧಾರಕ್ಕೆ ಮಾತ್ರ ಬಳಸಿಕೊಂಡು ಸಮುದಾಯವನ್ನು ಮರೆತಂತೆ ವರ್ತಿಸುತ್ತಿದ್ದಾರೆ. ದಲಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ನಾಲ್ಕು ವರ್ಷದ ಹಿಂದೆ ರಾಜ್ಯ ಸರಕಾರ ನೀಡಿದ್ದ ಆಶ್ವಾಸನೆ ಈಗಲೂ ಫಲಿಸಿಲ್ಲ. ಇಂತಹ ಸ್ಥಿತಿ ನಡುವೆ ಪ.ಜಾ ಬಡ ವಿದ್ಯಾರ್ಥಿಗಳು ಸರಕಾರವನ್ನು ನಂಬಿ ವಿದ್ಯಾಭ್ಯಾಸ ಮಾಡುವುದಾದದರೂ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ದಸಂಸ ತಾಲೂಕು ಸಂಯೋಜಕ ಜಗದೀಶ್, ಮುಖಂಡ ರಮೇಶ್, ಚಂದ್ರು, ಬಿರಡಹಳ್ಳಿ ಕುಮಾರ್ ಇದ್ದರು.

ಫೊಟೋ- ಸಕಲೇಶಪುರದಲ್ಲಿ ಶುಕ್ರವಾರ ದಸಂಸ ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್ ಪತ್ರಿಕಾಗೋಷ್ಟಿ ನಡೆಸಿದರು.






No comments:

Post a Comment