BHEEMA VIJAYA KARKAN25113/13/7/2015-TC HASSAN

ಶಾಸಕರ ಸ್ವಯಂ ವೈಭವೀಕರಣಕ್ಕೆ ಅಂಬೇಡ್ಕರ್ ಜಯಂತಿ: ದಸಂಸ ಟೀಕೆ


ಸಕಲೇಶಪುರ: ಪಟ್ಟಣದಲ್ಲಿ ಇದೆ ತಿಂಗಳ 29 ರಂದು ನಡೆಸಲು ಉದ್ದೇಶಿಸಿರುವ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರ ಸ್ವಯಂ ವೈಭವೀಕರಣಕ್ಕಾಗಿಯೆ ಹೊರತು ಅಂಬೇಡ್ಕರ್ ಅವರ ಮೇಲಿನ ಪ್ರೀತಿಗಲ್ಲ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಬೆಳಗೋಡು ಬಸವರಾಜು ಹೇಳಿದರು.
ಪಟ್ಟಣದಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿದ ಅವರು, ಕಳೆದ ಮೂರು ವರ್ಷಗಳಿಂದ 9 ಮತ್ತು 10ನೆ ತರಗತಿ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ. ಅಂಬೇಡ್ಕರ್ ಭವನ ಕಾಮಗಾರಿ ಮುಗಿದಿದ್ದರೂ ಉದ್ಘಾಟನೆಯಾಗಿಲ್ಲ. ದಲಿತರಿಗೆ ಸಂಬಂಧಿಸಿದ ಎಷ್ಟೊ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ. ಇದನ್ನೆಲ್ಲಾ ನಿಭಾಯಿಸಬೇಕಾದ ಶಾಸಕ ಕುಮಾರಸ್ವಾಮಿ ಅವರು ಸಂಘಟನೆಯಿಂದ ದೂರ ಉಳಿದವರನ್ನೆಲ್ಲಾ ಸೇರಿಸಿ ದಲಿತ ಸಂಘಟನೆಗಳ ಒಕ್ಕೂಟ ಸ್ಥಾಪಿಸಿ ಆಮೂಲಕ ಅಂಬೇಡ್ಕರ್ ದಿನಾಚರಣೆ ಮಾಡಲು ಹೊರಟಿದ್ದಾರೆ. ಈ ಕಾರ್ಯಕ್ರಮ ಜೆಡಿಎಸ್ ಉದ್ಧಾರಕ್ಕಾಗಿಯೆ ಹೊರತು ದಲಿತ ಸಮುದಾಯದ ಮೇಲಿನ ಕಾಳಜಿಗಲ್ಲ ಎಂದರು.
ದಸಂಸ ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್ ಮಾತನಾಡಿ, ಸಿಗರನಹಳ್ಳಿ ವಿಚಾರದಲ್ಲಿ ದಲಿತರ ಪರವಾಗಿ ಧ್ವನಿ ಎತ್ತದ ಶಾಸಕ ಕುಮಾರಸ್ವಾಮಿ ಅವರು ತಾವು ಹಾಗೂ ತಮ್ಮ ಪತ್ನಿ ಚಂಚಲಾ ಕುಮಾರಸ್ವಾಮಿ ಅವರ ಭಾವಚಿತ್ರಗಳನ್ನು ಎಲ್ಲೆಡೆ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. 29ರ ಸಮಾರಂಭದಲ್ಲಿ ಫಾರಂ ನಂ.53ರ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡುವ ತಂತ್ರ ಮಾಡಿ ಎಲ್ಲಾ ಕೀರ್ತಿಯೂ ತಮಗೆ ದೊರೆಯಲಿ ಎಂದು ಆಸೆ ಪಟ್ಟಿದ್ದಾರೆ. ದಶಕದಿಂದ ನಡೆಸಿದ ನಡೆಸಿದ ಹೋರಾಟದ ಫಲವಾಗಿ ತಮ್ಮ ಸಂಘಟನೆಗೆ ಇದೀಗ ಜಯ ಲಭಿಸಿದ್ದು ತಾಲೂಕಿನ ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲು ಸರಕಾರ ಮುಂದಾಗಿದೆ. ಇದರ ಲಾಭ ಪಡೆಯಲು ನಿಜವಾಗಲೂ ಹೋರಾಡಿದವರನ್ನು ದೂರವಿಟ್ಟು ತಾವೆ ದೊಡ್ಡ ಹೋರಾಟಗಾರರು ಎಂದು ಬಿಂಬಿಸಿಕೊಳ್ಳಲು ಮುಂದಾಗಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದರು.
ಪಟ್ಟಣದಲ್ಲಿ 29 ರಂದು ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮಕ್ಕೆ ತಮ್ಮ ಸಂಘಟನೆಯ ವಿರೋಧವಿದೆ. ಅಂದಿನ ಕಾರ್ಯಕ್ರಮದಲ್ಲಿ ಸಾಗುವಳಿ ಚೀಟಿ ನೀಡಲು ದಸಂಸ ಅವಕಾಶ ಕೊಡುವುದಿಲ್ಲ. ಹಾಗೇನಾದರೂ ಶಾಸಕರು ಫಲಾನುಭವಿಗಳಿಗೆ ತಾವೇ ಸಾಗುವಳಿ ಚೀಟಿ ನೀಡುವುದಾದರೆ ತಮ್ಮ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಸಲಿ. ಅದನ್ನು ಬಿಟ್ಟು ಪ್ರಾಮಾಣಿಕ ಹೋರಾಟಗಾರರನ್ನು ಮಟ್ಟ ಹಾಕಿ ತಮ್ಮ ಪ್ರಾಭಲ್ಯ ಉಳಿಸಿಕೊಳ್ಳಲು ದಲಿತ ಸಮುದಾಯವನ್ನು ಹಾದಿ ತಪ್ಪಿಸುವ ಕೆಲಸ ಮಾಡಬಾರದು ಎಂದರು. ಪತ್ರಿಕಾಗೋಷ್ಟಿಯಲ್ಲಿ ದಸಂಸ ತಾಲೂಕು ಸಂಘಟನಾ ಸಂಚಾಲಕ ಚಂದ್ರು, ಕುಮಾರ್, ಸುರೇಶ್ ಇದ್ದರು.

No comments:

Post a Comment